ನೂರೆಲೆ ಗೆಣಸು -
	ಡಯಸ್ಕೋರಿಯೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಬಳ್ಳಿ, ತುಂಗೆಗೆಣಸು, ತುಪ್ಪದಗೆಣಸು, ಮುಡಿಗೆಣಸು, ಮಂಟಿಗೆಣಸು ಮುಂತಾದವು ಪರ್ಯಾಯನಾಮಗಳು. ಇದರ ವೈಜ್ಞಾನಿಕ ಡಯಸ್ಕೋರಿಯ ಏಲೇಟ.

	ಇದು ಆಗ್ನೇಯ ಏಷ್ಯಾದ ಮೂಲನಿವಾಸಿ. ಭಾರತದಾದ್ಯಂತ ಕಾಣದೊರೆಯುತ್ತದೆ. ಗುಜರಾತ್, ಕರ್ನಾಟಕ, ಖಾನ್‍ದೇಶ ಮತ್ತು ಮುಂಬಯಿಗಳಲ್ಲಿ ಹೆಚ್ಚು ಸಾಮಾನ್ಯ. ಬಂಗಾಳ, ಬಿಹಾರ, ಒರಿಸ್ಸಾಗಳಲ್ಲೂ ಅಸ್ಸಾಂನಲ್ಲೂ ಇದನ್ನು ಅಧಿಕವಾಗಿ ಬೆಳೆಯಲಾಗುತ್ತದೆ. ಕರ್ನಾಟಕದ ಮಲೆನಾಡಿನಲ್ಲಿ ಇದರ ಬೆಳೆ ಹೆಚ್ಚು

	ಇದು ದೊಡ್ಡದಾಗಿ ಸುಮಾರು 15 ಮೀ. ಎತ್ತರ ಬೆಳೆಯುವ ಬಳ್ಳಿ. ಕಾಂಡ ನಾಲ್ಕು ಮೂಲೆಯುಳ್ಳದ್ದಾಗಿದ್ದು ಆಸರೆಯನ್ನು ಸುರುಳಿ ಸುರುಳಿಯಾಗಿ ಸುತ್ತಿಕೊಂಡಿರುತ್ತದೆ. ಎಲೆ ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯ ನಾಳ ವಿನ್ಯಾಸ ಎದ್ದು ಕಾಣುವಂತಿದೆ. ಬುದಭಾಗದ ಎಲೆ ಅಗಲವಾಗಿ ಅವರೆಕಾಳಿನಾಕಾರದ್ದಾಗಿದೆಯಾದರೆ ತುದಿ ಎಲೆ ವೀಳ್ಳೆಯದೆಲೆಯಂತೆ ಚೂಪಾಗಿದೆ. ಗೆಡ್ಡೆಗಳು ಗೋಲಾಕಾರದವು. ಇಲ್ಲವೆ ಉದ್ದುದ್ದವಾಗಿವೆ. ಗೆಡ್ಡೆಯ ಗಾತ್ರವೂ ದೊಡ್ಡದೇ; ಸುಮಾರು 0.5-1 ಮೀ. ಉದ್ದವಿರುವುದುಂಟು.

	ಇದನ್ನು ಗೆಡ್ಡೆಗಳಿಂದಲೇ ಅಭಿವೃದ್ದಿಪಡಿಸಬಹುದು. ನೀರು ಚೆನ್ನಾಗಿ ಬಸಿದು ಹೋಗುವಂಥ ನೆಲ ಇದರ ಬೇಸಾಯಕ್ಕೆ ಉತ್ತಮ. ಇದನ್ನು ಶುದ್ದ ಬೆಳೆಯಾಗಿಯೋ ಶುಂಠಿ, ತೆಂಗುಗಳೊಡನೆ ಮಿಶ್ರ ಬೆಳೆಯಾಗಿಯೋ ಬೆಳೆಯಬಹುದು. ನೆಟ್ಟ ಹತ್ತು ತಿಂಗಳಲ್ಲಿ ಕೊಯ್ಲಿಗೆ ಬರುವುದು. ಗೆಡ್ಡೆಗಳು ಬಲಿತ ಮೇಲೆ ಬಳ್ಳಿ ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಪ್ರಾರಂಭವಾಗುವುದು.ಆಗ ಬೆಳೆ ಕೊಯ್ಲಿಗೆ ಬಂದಿದೆ ಎಂದು ಗೊತ್ತಾಗುತ್ತದೆ. ಒಂದು ಬಳ್ಳಿಯಿಂದ ಎರಡರಿಂದ ಮೂರು ಗೆಡ್ಡೆಗಳು ಸಿಗುತ್ತವೆ. ಶುದ್ಧ ಬೆಳೆಯಾಗಿ ಬೆಳೆದರೆ ಎಕರೆಗೆ 3000 ದಿಂದ 5000 ಕೆಜಿ ಗೆಡ್ಡೆ ಇಳುವರಿ ಸಿಗುವುದು. 

	ಈ ಗೆಡ್ಡೆಯನ್ನು ಆಹಾರವಾಗಿ ಉಪಯೋಗಿಸಬಹುದು. ಇದರಲ್ಲಿ ಪಿಷ್ಟ ಪಧಾರ್ಥ ಹೆಚ್ಚಾಗಿದೆ. ಇದನ್ನು ಅಕ್ಕಿ, ರಾಗಿ, ಗೋದಿ ಮತ್ತು ಜೋಳಗಳಿಗೆ ಬದಲಾಗಿ ಉಪಯೋಗಿಸುವುದಿದೆ. ಇದು ಬರಿಯ ಆಹಾರ ದೃಷ್ಟಿಯಿಂದಲ್ಲದೇ ಔಷಧಿಯ ಪ್ರಾಮುಖ್ಯವನ್ನೂ ಪಡೆದಿದೆ. ಇದನ್ನು ಜಂತುಹುಳುಗಳು, ಮೂಳೆರೋಗ, ಮತ್ತು ಗಾನರೀಯ ರೋಗಗಳ ಚಿಕಿತ್ಸೆಯಲ್ಲಿ ಬಳಸುವರೆಂದು ಹೇಳಲಾಗಿದೆ.
(ಎಸ್.ಐ.ಎಚ್.)

ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ